fbpx
Have Any Questions? ab@agrifi.in
+91-7094111133

ಕೃಷಿ ಕ್ಷೇತ್ರದವರಿಗೆ ಸಾಲದ ನೆರವು ಒದಗಿಸಲು ಬಂದ ‘ಅಗ್ರಿ ಫೈ’ ಸ್ಟಾರ್ಟಪ್ !

ಬೆಂಗಳೂರು, ಡಿ.10: ಬಹುತೇಕ ಸ್ಟಾರ್ಟಪ್‌ಗಳು ನಗರ ಕೇಂದ್ರಿತವಾಗಿ ಇಲ್ಲವೇ ತಂತ್ರಜ್ಞಾನ ಕೇಂದ್ರಿತವಾಗಿ ಇರುತ್ತವೆ. ಆದರೆ, ಇಲ್ಲೊಂದು ಯುವಕರ ತಂಡ ಸಮಗ್ರ ಕೃಷಿ ಬೆಳವಣಿಗಾಗಿ ರೈತರು ಮತ್ತು ರೈತರನ್ನು ಒಳಗೊಂಡ ಇತರೆ ಎಲ್ಲ ವ್ಯಾಪಾರಸ್ಥರನ್ನು ಒಟ್ಟುಗೂಡಿಸಿ ಅವರನ್ನು ಬಲವರ್ಧನೆ ಮಾಡುವ ಮೂಲಕ ಕೃಷಿ ಕ್ಷೇತ್ರದ ಪ್ರಗತಿಗೆ ಯೋಜನೆಯನ್ನು ರೂಪಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈಗಲೂ ಕೃಷಿ ಸಾಲ ಸುಲಭವಾಗಿಲ್ಲ. ಯಾವುದೇ ಸಹಕಾರಿ ಬ್ಯಾಂಕ್‌ಗಳು ಅಥವಾ ಖಾಸಗಿ ಬ್ಯಾಂಕ್‌ಗಳು ನಿಗದಿತ ಸಮಯಕ್ಕೆ ರೈತನಿಗೆ ಅಗತ್ಯದಷ್ಟು ಸಾಲಸೌಲಭ್ಯ ಒದಗಿಸುವುದಿಲ್ಲ. ರೈತ ಈಗಲೂ ಅವಲಂಬಿಸಿರುವುದು ಬೀಜ ಮತ್ತು ರಸಗೊಬ್ಬರ ಅಂಗಡಿಗಳ ಮಾಲೀಕರು ಅಥವಾ ಎಪಿಎಂಸಿ ಮಾರುಕಟ್ಟೆಯಲ್ಲಿನ ಉತ್ಪನ್ನ ಖರೀದಿ ಮಾಡುವ ವ್ಯಾಪಾರಸ್ಥರನ್ನು. ರೈತನಿಗೆ ವರ್ಷದ ಬೆಳೆ ತೆಗೆಯಲು ಅಗತ್ಯವಾದ ಬೀಜ, ರಸಗೊಬ್ಬರ ನೀಡುತ್ತಾರೆ. ಬೆಳೆ ಬಂದಾಗ ಆ ಹಣವನ್ನು ವಾಪಸ್ ಪಡೆಯುತ್ತಾರೆ. ಹೀಗೆ ಕೃಷಿಗೆ ನೆರವು ನೀಡುವಂತಹ ವ್ಯಾಪಾರಿಗಳೂ ಸಹ ಸೀಮಿತ ರೈತರೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ಇಂತಹ ಉತ್ತಮ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಸಾಲಸೌಲಭ್ಯ ಒದಗಿಸಲು ‘ಅಗ್ರಿ ಫೈ’ ಎಂಬ ಸ್ಟಾರ್ಟಪ್‌ ಮುಂದಾಗಿದೆ.

ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದಂತಹ ಅಭಿಲಾಷ್ ತಿರುಪತಿ, ಕೆ.ಆರ್. ರಘುಚಂದ್ರ ಮತ್ತು ಮಿತಿಲೇಶ್ ಕುಮಾರ್ ಎಂಬುವವರು ಅಗ್ರಿನ್ನೋವ್ ಟೆಕ್ನಾಲಜೀಸ್ ಪ್ರೈ.ಲಿ. ಎಂಬ ಕಂಪನಿ ಸ್ಥಾಪಿಸಿ ಆ ಮೂಲಕ ‘ಅಗ್ರಿ ಫೈ’ ಹೆಸರಿನಲ್ಲಿ ಕೃಷಿ ಕ್ಷೇತ್ರದ ಒಟ್ಟಾರೆ ಬೆಳವಣಿಗೆಗಾಗಿ ಸ್ಟಾರ್ಟಪ್ ಯೋಜನೆಗಳನ್ನು ರೂಪಿಸಿದ್ದಾರೆ.

ಕೃಷಿ ಖಾತಾ ಆ್ಯಪ್: ರೈತರಿಗೆ ಸಾಲಸೌಲಭ್ಯ ನೀಡುವಂತಹ ವ್ಯಾಪಾರಸ್ಥರಿಗೆ ಸಾಲಸೌಲಭ್ಯ ಒದಗಿಸಿ ಆ ಮೂಲಕ ಹೆಚ್ಚಿನ ರೈತರಿಗೆ ಸಾಲದ ನೆರವು ಒದಗಿಸಬೇಕು ಎಂಬುದು ಅಗ್ರಿಫೈನ ಮುಖ್ಯ ಉದ್ದೇಶ. ಅದಕ್ಕಾಗಿ ‘ಕೃಷಿ ಖಾತಾ’ ಆ್ಯಪ್ ಸಿದ್ಧಪಡಿಸಿದೆ. ಪ್ಲೇ ಸ್ಟೋರ್ ಮೂಲಕ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲಿ ಕೇಳಲಾಗಿರುವ ವಿವರಗಳನ್ನು ಭರ್ತಿ ಮಾಡಿ, ಸಾಲದ ಅಗತ್ಯ ಇದ್ದರೆ ಅದಕ್ಕೆ ಮನವಿ ಸಲ್ಲಿಸಬಹುದು.

ಸಾಮಾನ್ಯವಾಗಿ ತಿಂಗಳ ಸಂಬಳ ಪಡೆಯುವವರು, ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವವರಿಗೆ ಸಿಬಿಲ್ ಸಂಖ್ಯೆಗೆ ಅನುಗುಣವಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಆದರೆ, ಬಹುತೇಕ ವ್ಯಾಪಾರಸ್ಥರು ಈಗಲೂ ನಗದು ವ್ಯವಹಾರವನ್ನೇ ಅವಲಂಬಿಸಿರುತ್ತಾರೆ. ರೈತರಿಗೆ ತಾವು ನೀಡಿದ ನೆರವನ್ನು ಚೀಟಿಗಳಲ್ಲಿಯೇ ಬರೆದಿಟ್ಟುಕೊಂಡಿರುತ್ತಾರೆ. ಅಂತಹ ವ್ಯಾಪಾರಸ್ಥರನ್ನು ಡಿಜಟಲೀಕರಣ ಮಾಡುವ ಉದ್ದೇಶವೇ ಈ ಕೃಷಿ ಖಾತಾ ಆ್ಯಪ್. ವ್ಯಾಪಾರಸ್ಥರು ತಮ್ಮ ವ್ಯವಹಾರದ ಎಲ್ಲ ವಿವರಗಳನ್ನು ಕೃಷಿ ಖಾತಾದಲ್ಲಿ ದಾಖಲಿಸಬಹುದು. ಎಷ್ಟು ಜನ ರೈತರಿಗೆ ಸಾಲ ಒದಗಿಸಲಾಗಿದೆ, ಅವರ ವಿವರ, ಇದುವರೆಗೆ ನೀಡಿರುವ ಸಾಲದ ಮೊತ್ತ, ಬಡ್ಡಿ ಮುಂತಾದವುಗಳನ್ನು ದಾಖಲಿಸಬಹುದು.

ಕೃಷಿ ವ್ಯಾಪಾರಸ್ಥರು ಹೀಗೆ ಕೃಷಿ ಖಾತಾದಲ್ಲಿ ದಾಖಲಿಸಿರುವ ಅಂಕಿ ಅಂಶಗಳನ್ನು ಗಮನಿಸಿ ಅವರಿಗೆ ವಿಶೇಷ ಸ್ಕೋರ್ ಸಿದ್ಧಪಡಿಸಲಾಗುತ್ತದೆ. ಅವರ ವೈಯಕ್ತಿಕ ಸಿಬಿಲ್ ಮತ್ತು ಪ್ರತಿನಿತ್ಯದ ವಹಿವಾಟಿನ ಸ್ಕೋರ್ ಎರಡನ್ನೂ ಪರಿಗಣಿಸಿ ಅಗ್ರಿಫೈ ಸಂಸ್ಥೆಯು ವ್ಯಾಪಾರಸ್ಥರ ಪರವಾಗಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳ ಮುಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಸಾಲ ಒದಗಿಸಲು ಸಹಾಯ ಮಾಡುತ್ತಾರೆ. ಎನ್‌ಬಿಎಫ್‌ಸಿ ಜೊತೆ ಒಪ್ಪಂದ: ಕೃಷಿ ಕ್ಷೇತ್ರದಲ್ಲಿ ಪ್ರತಿನಿತ್ಯ ತೊಡಗಿಸಿಕೊಂಡಂತಹ ವ್ಯಾಪಾರಸ್ಥರಿಗೆ ಸುಲಭವಾಗಿ ಸಾಲಸೌಲಭ್ಯ ಒದಗಿಸಲು ಅನುಕೂಲ ಆಗುವಂತೆ ನಮ್ಮ ಸಂಸ್ಥೆಯು ಕೆಲವು ಬ್ಯಾಂಕಿಂಗ್ ರಹಿತ ಹಣಕಾಸು ಸಂಸ್ಥೆಗಳೊಂದಿಗೆ (ಎನ್‌ಬಿಎಫ್‌ಸಿ) ಒಪ್ಪಂದ ಮಾಡಿಕೊಂಡಿದೆ ಎನ್ನುತ್ತಾರೆ ‘ಅಗ್ರಿ ಫೈ’ ಮಾತೃಸಂಸ್ಥೆ ಅಗ್ರಿನ್ನೋವ್ ಟೆಕ್ನಾಲಜೀಸ್ ಪ್ರೈ.ಲಿ. ಸಹ ಸ್ಥಾಪಕ ಕೆ.ಆರ್. ರಘುಚಂದ್ರ. ಸದ್ಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವವರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಾಲಕ್ಕಾಗಿಯೂ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಸಿಬ್ಬಂದಿ ಅವರ ವಹಿವಾಟು ಬಗ್ಗೆ ವರದಿ ತಯಾರಿಸಿ ಸಾಲ ಕೊಡಿಸಲು ನೆರವು ನೀಡುತ್ತಿದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಐದು ಮಿಲಿಯನ್ ವ್ಯಾಪಾರಸ್ಥರನ್ನು ಈ ವ್ಯವಸ್ಥೆಯಡಿ ತರುವ ಉದ್ದೇಶ ಹೊಂದಲಾಗಿದೆ ಎಂದು ರಘುಚಂದ್ರ ವಿವರಿಸಿದರು.

ರೈತರಿಗೆ ಕೃಷಿ ಮಾಹಿತಿ: ಕೃಷಿ ವ್ಯಾಪಾರಸ್ಥರಿಗೆ ಸಾಲದ ನೆರವು ನೀಡುವ ಮೂಲಕ ರೈತರಿಗೆ ಸಹಾಯವಾಗುತ್ತದೆ. ಇದಲ್ಲದೆ, ರೈತರಿಗೆ ನೇರವಾಗಿ ಕೆಲವು ತಾಂತ್ರಿಕ ಮಾಹಿತಿ ಸಹ ಒದಗಿಸಲು ವ್ಯವಸ್ಥೆ ಸಿದ್ಧಪಡಿಸಲಾಗುತ್ತದೆ ಎಂದು ರಘುಚಂದ್ರ ಹೇಳಿದರು. ಯಾವುದೇ ಜಿಲ್ಲೆ ಅಥವಾ ಹೋಬಳಿಯ ರೈತ ತನ್ನ ಜಮೀನು ಮತ್ತು ತಾನು ಬೆಳೆಯುವ ಬೆಳೆಯ ವಿವರವನ್ನು ದಾಖಲಿಸಿದರೆ ಅಲ್ಲಿ ಮಳೆ ಯಾವಾಗ ಬರುತ್ತದೆ, ಈ ವರ್ಷ ಯಾವ ಬೆಳೆ ಹೇಗೆ ಇಳುವರಿ ಕೊಡಬಹುದು, ಯಾವ ಬೆಳೆಗೆ ಮಾರುಕಟ್ಟೆಯ ದರ ಎಷ್ಟಿರಬಹುದು, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಬೇಡಿಕೆ ಸೃಷ್ಟಿಸುವಂತ ಧಾನ್ಯ ಅಥವಾ ತೋಟಗಾರಿಕಾ ಬೆಳೆ ಯಾವವು, ಬೆಳೆಗೆ ತಗುಲಬಹುದಾದ ರೋಗದ ಮಾಹಿತಿ ಮತ್ತು ಅದಕ್ಕೆ ಪರಿಹಾರ ಹೀಗೆ ಹತ್ತು ಹಲವು ಪ್ರಯೋಜನಗಳನ್ನು ರೈತರೂ ಪಡೆದುಕೊಳ್ಳಬಹುದು ಎಂದು ವಿವರಿಸಿದರು.

As covered by oneindia kannada :

Read more at: https://kannada.oneindia.com/agriculture/agrifi-startup-that-came-up-with-a-loan-for-agriculture-traders-242045.html?ref_medium=Mobile&ref_source=OI-KN&ref_campaign=Popup-Share